ಚುನಾವಣೆ : ಪ್ರಜಾಪ್ರಭುತ್ವದ ಜೀವನಾಡಿ; ಜಾಗೃತ ಮತದಾರನಿಗಷ್ಟೇ ಕ್ರಾಂತಿ ಸಾಧ್ಯ!

by ರಾಜೇಶ್ ಪದ್ಮಾರ್, ಬೆಂಗಳೂರು.

Indian voters hold up their voter ID car

ಚುನಾವಣೆಯ ಈ ಸಂದರ್ಭದಲ್ಲಿ ಮತದಾರರನ್ನು ಎಚ್ಚರಿಸುವುದು ಎಲ್ಲ ಪ್ರಜ್ಞಾವಂತರ ಹಾಗೂ ಮಾಧ್ಯಮಗಳ ಕರ್ತವ್ಯ. ‘ಮತ’ ಎನ್ನುವುದು ಪ್ರತಿಯೊಬ್ಬನ ಕೈಯಲ್ಲಿನ ‘ಅಸ್ತ್ರ’. ಅದನ್ನು ಮಾರಿಕೊಳ್ಳಬಾರದೆಂದು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಾದುದು ಪ್ರಥಮ ಕೆಲಸ. ಅದರ ಜೊತೆಜೊತೆಗೇ ಇರುವ ಮತ್ತೊಂದು ಕೆಲಸವೆಂದರೆ, ತಪ್ಪದೆ ಮತಚಲಾಯಿಸುವುದು. ಮತವನ್ನು ಚಲಾಯಿಸಲು ಮತಗಟ್ಟೆಗೇ ಹೋಗದವನು ಚುನಾವಣೆಯ ನಂತರ ರಾಜಕಾರಣಿಗಳನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನೇ ಕಳೆದುಕೊಂಡುಬಿಡುತ್ತಾನೆ. ಮತ್ತು ಏನಾದರೂ, ಕೆಟ್ಟ ಅಭ್ಯರ್ಥಿ ಚುನಾಯಿತನಾದಲ್ಲಿ ಅದಕ್ಕೇ ಮತ ಚಲಾಯಿಸದ ಈ ವ್ಯಕ್ತಿಯೇ ಪ್ರಮುಖ ಕಾರಣನಾಗುತ್ತಾನೆ. ಹೀಗಾಗಿ, ಚುನಾವಣೆಯ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಪ್ರತಿಯೊಬ್ಬರನ್ನೂ ಆಗ್ರಹಿಸಬೇಕು.

ಮತ್ತೊಂದು ಚುನಾವಣೆಗೆ ಕರ್ನಾಟಕ ಸಜ್ಜಾಗಿದೆ. ರಾಜ್ಯ ರಾಜಕೀಯ ರಣಾಂಗಣದ ಕಾವು ದಿನೇ ದಿನೇ ಏರುತ್ತಿದೆ. ಎಲ್ಲಾ ಪಕ್ಷಗಳೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತೊಡೆ ತಟ್ಟಿ ನಿಂತಿವೆ. ಸ್ಪರ್ಧೆಗೆ ನಿಂತ ಅಭ್ಯರ್ಥಿಗಳೆಲ್ಲರಿಗೂ ಗೆಲ್ಲುವ ಆಕಾಂಕ್ಷೆ. ಮೂರು ಹಂತಗಳ ಈ ಪ್ರಕ್ರಿಯೆಯ ಬಳಿಕ ಫಲಿತಾಂಶ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ರಾಜಕೀಯ ಪಂಡಿತರು ಕೈ ಹಾಕಿದ್ದಾರೆ. ನಾಯಕರನೇಕರು ದೆಹಲಿಗೆ ದೌಡಾಯಿಸಿ. ವರಿಷ್ಠರೊಂದಿಗೆ ಮಾತುಕತೆ ನಡೆಸಿ ರಾಜ್ಯಕ್ಕೆ ಮರಳಿದ್ದಾರೆ. ಎಲ್ಲವೂ ಚುನಾವಣೆಯನ್ನು ಗೆಲ್ಲಲು ಮಾಡುವ ಪ್ರಯತ್ನದ ಭಾಗ. ಗೆಲುವು ಮಾತ್ರ ಧ್ಯೇಯ. ಅದಕ್ಕಾಗಿ ಯಾವ ಮಾರ್ಗಕ್ಕೂ ಹೋಗಲು ತಯಾರು.

ರಾಜಕೀಯ ಪಕ್ಷಗಳ ಗುರಿ ಕೇವಲ ಚುನಾವಣೆಯನ್ನು ಅದ್ದೂರಿಯಾಗಿ ಎದುರುಗೊಂಡು ಗೆದ್ದು ಬರುವುದೇ ಮಾತ್ರವೇನೋ ಎಂದೆನಿಸಿದರೆ ಅದು ತಪ್ಪಲ್ಲ. ಯಾಕೆಂದರೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಯಾವುದೇ ರಾಜಕೀಯ ಪಕ್ಷದ ಪರಮ ಗುರಿ. ಅಧಿಕಾರ ಕೈಲಿದ್ದಾಗ ಮಾತ್ರವೇ ಅಭಿವೃದ್ಧಿಯ ಕನಸನ್ನು ಸುಲಭವಾಗಿ ನೆರವೇರಿಸಬಹುದು. ಅಧಿಕಾರವಿದ್ದರೆ ಆಡಳಿತ ಯಂತ್ರ ಕೈಯಲ್ಲಿರುತ್ತದೆ ಹಾಗೂ ತಮ್ಮ ಕಲ್ಪನೆಯನ್ನು ಸಾಕಾರಗೊಳಿಸಬಹುದು. ಈ ಪೈಕಿ ಪ್ರಾಮಾಣಿಕ ಆಡಳಿತ ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ಎರಡನೇ ವಿಚಾರ. ಒಟ್ಟಿನಲ್ಲಿ ಸಿಂಹಾಸನಕ್ಕಾಗಿನ ಈ ಹೋರಾಟಕ್ಕೆ ತೀವ್ರ ಪ್ರಯತ್ನ ಈಗಾಗಲೇ ಪ್ರಾರಂಭವಾಗಿದ್ದು ‘ಯಶಸ್ಸಿನ ಮಂತ್ರ’ ಎಲ್ಲೆಡೆಯಿಂದ ಜಪಿಸಲ್ಪಡುತ್ತಿದೆ. ಪ್ರಜ್ಞಾವಂತ ಮತದಾರನ ಮೇಲೆಯೇ ಎಲ್ಲವೂ ಕೊನೆಗೆ ಅವಲಂಬಿತ.

ಚುನಾವಣೆ ಗೆದ್ದರೆ ಏನು ಮಾಡುತ್ತೇವೆ? ನಿಮಗೇನಲ್ಲಾ ಹೊಸ ವ್ಯವಸ್ಥೆಗಳು, ಹೊಸ ಯೋಜನೆಗಳು ಕಾದಿವೆ? ಎಂದು ಈಗಾಗಲೇ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಬಿಡುಗಡೆಯಾಗಿವೆ. ಅನೇಕ ಬಾರಿ ಈ ಪ್ರಣಾಳಿಕೆಗಳು ಮೊಣಕೈಗೆ ಸವರಿದ ಬೆಲ್ಲದಂತೆ. ಕೇಳಲು-ಕಾಣಲು ಸವಿಯಾಗೇ ಇರುತ್ತವೆ. ಕಲರ್ ಟಿ.ವಿ., ಎರಡು ರೂಪಾಯಿಗೆ ಅಕ್ಕಿ, ನಿರುದ್ಯೋಗಿ ವೇತನ ಹೀಗೆ ಹತ್ತಾರು ಎದ್ದು ಕಾಣುವ ಪೊಳ್ಳು ಭರವಸೆಗಳೊಂದಿಗೆ ಪ್ರಮುಖ ರಾಜಕೀಯ ಪಕ್ಷಗಳು ಮತದಾರರಿಗೆ ಜಾದೂ ಮಾಡಹೊರಟಿವೆ. ಪಕ್ಷಗಳ ಪರಸ್ಪರ ಪೈಪೋಟಿ ಎಷ್ಟರಮಟ್ಟಿಗೆ ಇವೆಯೆಂದರೆ ಭರವಸೆ ಕೊಡುವುದರಲ್ಲೂ ನಿಸ್ಸೀಮರಾಗಿ ನಾಮುಂದು ತಾಮುಂದು ಎಂಬ ಸ್ಪರ್ಧೆಗೆ ಇಳಿದು ಬಿಡುತ್ತಾರೆ.

ಈ ಹಿಂದಿನ ಚುನಾವಣೆಗಳಲ್ಲಿ ರಾಜ್ಯದ ಮೂರು ವಿಭಿನ್ನ, ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರದ ರುಚಿ ಕಂಡಿದ್ದವು. ಸ್ವಲ್ಪ ಸಮಯ ವಿರೋಧ ಪಕ್ಷದಲ್ಲೂ ಕಾಲಹರಣ ಮಾಡಿದ್ದವು. ಮೂರು ಮುಖ್ಯಮಂತ್ರಿಗಳನ್ನು ಕಂಡ ಕಳೆದ ಚುನಾವಣೆಯಲ್ಲಿ ಅಭಿವೃದ್ಧಿಯ ಮಂತ್ರ ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಯಿತು ಎಂಬುದನ್ನು ಮತ್ತೆ ನಾವು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಚುನಾವಣೆಗೆ ಪೂರ್ತಿ ಕಡುವೈರಿಗಳಂತೆ ಪರಸ್ಪರ ಆರೋಪ – ಪ್ರತ್ಯಾರೋಪಗಳಲ್ಲಿ ತೊಡಗಿದ ಯಾವ ಪಕ್ಷವೂ, ನಂತರದ ಸರ್ಕಾರ ರಚನೆಯ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಮಿತ್ರತ್ವ ಸ್ಥಾಪಿಸಲು ಹಿಂದು-ಮುಂದೆ ನೋಡುವುದಿಲ್ಲ. ಕಡುವೈರಿಯೇ ಆಪ್ತಮಿತ್ರನಾಗುವ ಪ್ರಹಸನ ಇಲ್ಲಿ ಸಾಮಾನ್ಯ ಈ ಮಿತ್ರತ್ವವು ಅಧಿಕಾರದ ಅವಧಿಯಲ್ಲಿ ಅನೇಕ ಗೊಂದಲವನ್ನು ಸೃಷ್ಟಿಸಿ ಅಭಿವೃದ್ಧಿಯ ಚಿಂತನೆಯಿಂದ ಸಾಕಷ್ಟು ದೂರ ಸರಿದದ್ದೂ ಇದೆ. ಒಳ್ಳೆಯದು ಮಾಡಿದಾಗ ತಾನು ಮಾತ್ರ ಎಂದು ಮಿತ್ರ ಪಕ್ಷವನ್ನು ಬದಿಗಿರಿಸುವುದು ಅವರ ಅಸ್ತತ್ವದ ದೃಷ್ಟಿಯಿಂದ ಅನಿವಾರ‍್ಯ !

ಎಲ್ಲ ಕಾಲಕ್ಕೂ ಚುನಾವಣೆ ಪ್ರಜಾಪ್ರಭುತ್ವದ ಜೀವನಾಡಿ ಎಂಬ ವ್ಯಾಖ್ಯೆ ಅನ್ವಯಿಸುತ್ತದೆ. ಪ್ರಜಾಪ್ರಭುತ್ವದ ಮೂಲ ಉದ್ದೇಶವೇ ಜನಪ್ರತಿನಿಧಿಗಳ ಆಯ್ಕೆಯ ಅವಕಾಶ ಸಾಮಾನ್ಯ ಪ್ರಜೆಗೆ ನೀಡುವಂತದ್ದು. ಅನೇಕ ಬಾರಿ ಈ ಆಯ್ಕೆಯಲ್ಲೇ ನಾವು ಎಡವುತ್ತೇವೆ. ಪಕ್ಷಗಳು ಸಿದ್ಧಾಂತ-ವಿಚಾರಗಳನ್ನು ಬದಿಗಿರಿಸಿ ಉದ್ಯಮಿಗಳಿಗೆ, ಅನುಭವ ಇಲ್ಲದ ಇತರರಿಗೆ ಮಣೆ ಹಾಕುವುದರಿಂದ ಮತದಾರನ ಮುಂದಿರುವ ಆಯ್ಕೆಯ ಅವಕಾಶ ಮತ್ತೆ ಗೊಂದಲದ ಗೂಡಾಗುತ್ತದೆ. ಇದೇ ನಾಲ್ಕು ಅಭ್ಯರ್ಥಿಗಳಲ್ಲಿ ಬಿಳ್ಳೆಯವರ‍್ಯಾರು ಎನ್ನಲು ಭೂತಕನ್ನಡಿಯ

ಮೊರೆ ಹೋಗಬೇಕಾದ ಪ್ರಮೇಯಗಳು ಇಲ್ಲದಿರುವುದಿಲ್ಲ. ಹೀಗಾಗಿ ಅತ್ಯಂತ ಸಹಜವಾಗಿ ಮತದಾರನಿಗೆ ಈ ನಾಲ್ವರಲ್ಲಿ ಒಬ್ಬನ ಆಯ್ಕೆ ಅನಿವಾರ‍್ಯವೇ. ಇನ್ನು ಅನೇಕ ಬಾರಿ ಅಭ್ಯರ್ಥಿಯ ಅರ್ಹತೆಗಿಂತ ಆತನ ಪಕ್ಷ, ಜಾತಿ, ಮೊದಲಾದ ಸಂಗತಿಗಳೇ ಪ್ರಧಾನವಾಗುತ್ತವೆ. ನನ್ನ ಮತ ಈ ಬಾರಿ ಕಾಂಗ್ರೆಸ್‌ಗೆ, ಬಿಜೆಪಿಗೆಯಾ ಜೆಡಿಎಸ್‌ಗೆ ಎನ್ನುವ ಮಾತೇ ಅಧಿಕ ಹೊರತು ನನ್ನ ಮತ ‘ಈ ಅಭ್ಯರ್ಥಿಗೆ’ ಎನ್ನುವ ಮಾತು ಬಲು ಕ್ಷೀಣವಾಗಿ ಧ್ವನಿಸುವುದು ಸಾಮಾನ್ಯ.

ಈ ಚುನಾವಣೆಯಲ್ಲಿ ಮತದಾರನ ಪಾತ್ರ ಬಹು ಮಹತ್ತರ. ಈ ಕಳೆದ ಸರ್ಕಾರಗಳು ಅನುಭವಿಸಿದ ರಾಜಕೀಯ ಅರಾಜಕತೆಯಿಂದ ರಾಜ್ಯವನ್ನು ರಕ್ಷಿಸಬೇಕು. ರಾಜ್ಯದ ಒಟ್ಟು ಆಡಳಿತ ಯಂತ್ರವನ್ನು ಚುರುಕುಗೊಳಿಸುವತ್ತ ಮಾಧ್ಯಮಗಳು ದಿಟ್ಟತನವನ್ನು ಕಾಪಾಡಬೇಕಿದೆ. ಪ್ರಾಮಾಣಿಕತೆ ಪರೀಕ್ಷೆಗೊಳಪಡುವ ಸನ್ನಿವೇಶಗಳಲ್ಲಿ ದೃಢತೆಯನ್ನು ಕಾಪಾಡಬೇಕು. ತಮ್ಮ ತಮ್ಮ ಕೆಲಸವಾಗಲು ಪ್ರತಿನಿಧಿಗೆ ಕಾಸು- ಮತ್ತೊಂದು ಕೊಟ್ಟು ಕೆಲಸ ಮಾಡಿಸಿಕೊಳ್ಳಲೇಬಾರದು. ಈ ಭ್ರಷ್ಟತೆಯ ಅಮಲನ್ನು ಪ್ರಜೆಯೇ ಪ್ರತಿನಿಧಿಗೆ ಪರಿಚಯಿಸಬಾರದು. ಒಮ್ಮೆ ಅಮಲೇರಿದರೆ ಮತ್ತೆ ಅದು ಇಳಿಯುವುದು ಸಾಧ್ಯವೇ ಇಲ್ಲ.

ಈ ನಿಟ್ಟಿನಲ್ಲಿ ನಮ್ಮ ನಮ್ಮ ಕ್ಷೇತ್ರದ ಯೋಗ್ಯ ಅಭ್ಯರ್ಥಿಯನ್ನೇ ಆರಿಸೋಣ. ಆರಿಸಿದ ನಂತರ ಅವರನ್ನು ಕ್ರಿಯಾಶೀಲರನ್ನಾಗಿಸುವ ಹೊಣೆಗಾರಿಕೆಯಿಂದ ದೂರ ಸರಿಯದಿರೋಣ. ಹಣದ ಆಮಿಷ ಉದ್ಯೋಗದ ಪೊಳ್ಳು ಭರವಸೆಗಳಿಗೆ ಬಲಿಯಾಗದೆ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಯತ್ನಗಳಿಂದ ದೂರವಿರೋಣ. ನಾಡು-ನುಡಿಗೆ ಧಕ್ಕೆ ತರುವ ಎಲ್ಲ ಸಂಗತಿಗಳಿಗೆ ಉಗ್ರವಾಗಿ ಪ್ರತಿಕ್ರಿಯಿಸಲು ಸಿದ್ಧವಾಗಿರೋಣ. ಒಟ್ಟಿನಲ್ಲಿ ಪಕ್ಷ ಭೇಧ ಮರೆತು ನಾಡಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ. ರಾಜ್ಯ ರಾಜಕಾರಣ ಮತ್ತೆ ಗೊಂದಲದ ಗೂಡಾಗಿ ಅಭಿವೃದ್ಧಿ ಕುಂಠಿತವಾಗಿ, ಪತನದತ್ತ ಸಾಗುವುದನ್ನು ತಪ್ಪಿಸಲು ಈ ಚುನಾವಣೆ ಸೂಕ್ತ ಸಂದರ್ಭ.

ಜಾಗೃತ ಮತದಾರನಿಗಷ್ಟೇ ಕ್ರಾಂತಿ ಸಾಧ್ಯ!

ಅಭ್ಯರ್ಥಿಗಳನ್ನು ನಿಲ್ಲಿಸಿ, ಪ್ರಶ್ನಿಸಿ

 • ಭ್ರಷ್ಟಾಚಾರ ರಹಿತ ಆಡಳಿತ ನಿಮ್ಮಿಂದ ನಿಜಕ್ಕೂ ನಿರೀಕ್ಷಿಸಬಹುದೇ?
 • ಅಧಿಕಾರ ಕೈಗೆ ಸಿಕ್ಕಾಗ ಸಿದ್ಧಾಂತ-ಬದ್ಧತೆಗಳು ಮೂಲೆ ಸೇರಿಯಾವ
 • ‘ಜನಸೇವೆಗೆ ಮುಡಿಪಾಗಿಟ್ಟ ಜೀವನ’ ಎಂದರೆ ಸ್ವಂತಕ್ಕೆ ಆಸ್ತಿ-ಸಂಪತ್ತು ಸಂಪಾದಿಸುವುದೇ?
 •  ಕೃಷಿ ಸಮಸ್ಯೆಗೆ ಶಾಶ್ವತ ಪರಿಹಾರ ನಿಮ್ಮಲ್ಲಿದೆಯೇ?
 • ಸಾವಯವ ಕೃಷಿಗೆ ನಿಮ್ಮ ಕೊಡುಗೆಯೇನು?
 • ಗೋಹತ್ಯೆ ನಿಷೇಧ-ಗೋಸಂರಕ್ಷಣೆ ಬಗ್ಗೆ ನಿಮ್ಮ ನಿಲುವೇನು?
 • ಭಯೋತ್ಪಾದನೆಗೆ ವಿರುದ್ಧವಾದ ಒಂದು ಗಟ್ಟಿ ಕಾನೂನು ತರಲು ನಿಮ್ಮಿಂದ ಸಾಧ್ಯವೇ?
 • ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ಜಾರಿಗೊಳಿಸುವಿರಾ?
 • ಕುಟುಂಬ, ಸಮಾಜ ಒಡೆಯುವ ಮತಾಂತರಿಗಳ ಬಗ್ಗೆ ನಿಮ್ಮ ಕ್ರಮವೇನು?
 • ಭ್ರಷ್ಟಾಚಾರ ನಿರ್ಮೂಲನೆಗೆ ನಿಮ್ಮ ಹೆಜ್ಜೆಗಳೇನು?
 • ವಿಶೇಷ ಆರ್ಥಿಕ ವಲಯ (ಎಸ್.ಇ.ಜಡ್)ಕ್ಕೆ ನಿಮ್ಮ ಪರ್ಯಾಯವೇನು?
 • ಭೂ ಅತಿಕ್ರಮಣ, ಅಕ್ರಮ ಗಣಿಗಾರಿಕೆ ತಡೆಯುವ ಧೈರ್ಯ ನಿಮಗಿದೆಯೇ?
 • ಕನ್ನಡ ಭಾಷೆ – ಸಂಸ್ಕೃತಿ, ನೆಲ-ಜಲ ಉಳಿಸಲು ಏನು ಮಾಡುವಿರಿ?
 • ಮೇಲು-ಕೀಲು ತೊಡೆದು ಸಾಮರಸ್ಯ ತರಲು ನಿಮ್ಮ ಚಿಂತನೆಯೇನು?
 •  ಅಲ್ಪಸಂಖ್ಯಾತರ ತುಷ್ಟೀಕರಣ – ದೇಶಹಿತ, ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು?

ಮತದಾರ ಜಾಗೃತನಾದರೆ ಮಾತ್ರ, ರಾಜಕಾರಣಿಗಳೂ ಸರಿ ಹೋಗುತ್ತಾರೆ. ಪ್ರಜೆಯಾದವನು ಸದಾ ನಿದ್ರಿಸುತ್ತಿದ್ದರೆ, ಪ್ರಜಾಪ್ರತಿನಿಧಿ ಸರ್ವಾಧಿಕಾರಿಯಾಗುವುದರಲ್ಲಿ ಸಂಶಯವೇ ಇಲ್ಲ. ರಾಜಕಾರಣಿ ಸರಹೋದರೆ, ಮಿಕ್ಕ ಅನೇಕ ಸಂಗತಿಗಳು ತಾನಾಗಿಯೇ ಸರಿಹೋಗುತ್ತದೆ. ಸದಾ ಎಚ್ಚರದ ಸ್ಥಿತಿಯಲ್ಲಿರುವುದೇ ಪ್ರತಿಯೊಬ್ಬ ಪ್ರಜಾಪ್ರಭುತ್ವಕ್ಕೆ ನೀಡಬೇಕಾದ ಬೆಲೆಯಾಗಿದೆ.

ಯಾವುದೇ ಚುನಾವಣೆಯಿರಲಿ, ಅಲ್ಲಿ ಅಭ್ಯರ್ಥಿ ತನ್ನ ನಾಡು-ನುಡಿಯ ಸಂರಕ್ಷಣೆಗೆ ಸಾಯಲೂ ಸಿದ್ಧ ಎಂದು ಘೋಷಿಸಿ ನಂತರ ಸಾಯುವುದು ಬಿಡಿ, ನಿದ್ದೆಯಿಂದ ಏಳುವುದೂ ಇಲ್ಲ. ಈ ಜಡತ್ವದಿಂದ ಜನಪ್ರತಿನಿಧಿಗಳನ್ನು ಮತದಾರರೇ ಹೊರ ತರಬೇಕು. ಯಾಕೆಂದರೆ ಐದು ವರ್ಷಕ್ಕೊಮ್ಮೆ ಮತದಾನ ಮಾಡಿದರೆ ನಮ್ಮ ಕರ್ತವ್ಯ ಮುಗಿಯಿತು ಎಂಬ ಮಾನಸಿಕತೆಯಷ್ಟೇ ಸಾಲದು. ಜಾಗೃತ ಮತದಾರ ಎಂದೂ ಪ್ರಜಾಪ್ರಭುತ್ವದಲ್ಲಿ ಪ್ರಭುವಾಗಿಯೇ ಉಳಿಯುತ್ತಾನೆ. ಇಲ್ಲದಿದ್ದಲ್ಲಿ, ಪ್ರತಿನಿಧಿಯೇ ಪ್ರಭುವಾಗಿ, ಪ್ರಜೆ ಕೇವಲ ಸೇವಕನಾಗಿ ಸ್ಥಿತ್ಯಂತರಗೊಳ್ಳಬಹುದು. ಇಷ್ಟೇ, ಚುನಾವಣೆಯ ನಂತರವೂ ಜನಪ್ರತಿನಿಧಿಯನ್ನು ತುದಿಗಾಲ ಮೇಲೆ ನಿಲ್ಲಿಸುವ ಹೊಣೆಗಾರಿಕೆ ಮತದಾರನದ್ದು. ಮತದಾರ ತನ್ನೂರಿನ ಕೃಷಿ, ಶಿಕ್ಷಣ, ಆರೋಗ್ಯ, ರಸ್ತೆ ಮೊದಲಾದ ಮೂಲಭೂತ ಸೌಕರ‍್ಯಗಳ ಕುರಿತು ಅಗತ್ಯಗಳಿಗಾಗಿ ಪ್ರತಿನಿಧಿಯ ಗಮನ ಸೆಳೆಯಬೇಕು. ಹಾಗಾದಾಗ ಮಾತ್ರ ಮತದಾರ ‘ಜಾಗೃತ’ ಎನಿಸಲ್ಪಡುತ್ತಾನೆ. ಪ್ರಜಾಪ್ರಭುತ್ವ ಮತ್ತೆ ತೂಕಡಿಸದು.

Advertisements

Leave a comment

Filed under Articles

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s