ಭ್ರಷ್ಟಾಚಾರದ ವಿರುದ್ಧ ಹೋರಾಟ : ಬಲಗೊಳ್ಳಲಿ ಸ್ವಾಭಿಮಾನ

Article in Pungava June-15 isuue:

ಬಲಗೊಳ್ಳಲಿ ಸ್ವಾಭಿಮಾನ

ಹಗರಣಗಳ ಮೇಲೆ ಹಗರಣಗಳು ಬೆಳಕಿಗೆ ಬರುತ್ತಿರುವ ವೇಳೆಯಲ್ಲಿ ತನ್ನ ವರ್ಚಸ್ಸು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೇಂದ್ರ ಯುಪಿಎ ಸರ್ಕಾರ, ತಾನು ಭ್ರಮನಿರಸನ ಗೊಂಡಿರುವುದನ್ನು ಸಾಬೀತು ಪಡಿಸಿದೆ. ಹತಾಶೆಯ ಪ್ರಯತ್ನವೊಂದರಲ್ಲಿ ಭ್ರಷ್ಟಾಚಾರದ ವಿರುದ್ದ ದೆಹಲಿಯಲ್ಲಿ ಶಾಂತಿಯುತ ಸತ್ಯಾಗ್ರಹ ಹೂಡಿದ್ದ ಸಂತ ಬಾಬಾರಾಮ್‌ದೇವ್ ಹಾಗೂ ಸಾವಿರಾರು ಬೆಂಬಲಿಗರ ಮೇಲೆ ರಾತ್ರೋರಾತ್ರಿ ಅಧಿಕಾರದ ದರ್ಪವನ್ನು ತೋರಿದ್ದು, ನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.

‘ವಿದೇಶೀ ಬ್ಯಾಂಕುಗಳಲ್ಲಿ ಅಗಾಧ ಮೊತ್ತದಲ್ಲಿರುವ ಭಾರತೀಯರ ಕಪ್ಪುಹಣ (ಅಕ್ರಮ ಹಣ)ವನ್ನು ಭಾರತಕ್ಕೆ ತಂದು, ಅದನ್ನು ಭಾರತದ ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು’, ಎಂಬ ಬೇಡಿಕೆಯೊಂದನ್ನು ಮುಂದಿಟ್ಟು ಯೋಗಗುರು ಬಾಬಾ ರಾಮ್‌ದೇವ್ ದೇಶಾದ್ಯಂತ ಪ್ರತಿಭಟನೆಗೆ ಕರೆನೀಡಿದ್ದರು. ಲಕ್ಷಾಂತರ ಭಾರತೀಯರ ಬೆಂಬಲ ಹೊಂದಿರುವ ರಾಮ್‌ದೇವ್‌ರ ಈ ಪ್ರತಿಭಟನೆಯ ಕರೆಯು ಅದಾಗಲೇ ಕೇಂದ್ರ ಸರ್ಕಾರಕ್ಕೆ ನಡುಕ ಹುಟ್ಟಿಸಿತ್ತು. ಜೂನ್ ೪ರಂದು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎರಡು ತಿಂಗಳ ಮುಂಚೆಯೇ ಘೋಷಿಸಿದ್ದ ರಾಮ್‌ದೇವ್ ದೇಶದ ಬಹುತೇಕ ರಾಜ್ಯಗಳಲ್ಲಿ ಸಂಚರಿಸಿ ಜನಜಾಗೃತಿ ಸಭೆಗಳನ್ನುದ್ದೇಶಿಸಿ ಮಾತನಾಡಿ ದೇಶವಾಸಿಗಳ ಬೆಂಬಲ ಕೋರಿದ್ದರು.

ಭ್ರಷ್ಟಾಚಾರದ ವಿರುದ್ಧ ಜನಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹದ ಬಿಸಿ ಇನ್ನೂ ಆರಿರದ ವೇಳೆಯಲ್ಲೇ ರಾಮ್‌ದೇವ್ ಸತ್ಯಾಗ್ರಹ ಘೋಷಣೆ ಮಾಡಿದ್ದೂ ಕೇಂದ್ರ ಯುಪಿಎ ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು. ೨ಜಿ ಸ್ಪೆಕ್ಟ್ರಂ ಹಗರಣದಿಂದಾಗಿ ‘ಕ್ಲೀನ್ ಇಮೇಜ್’ಗೆ ತೀವ್ರ ಹಾನಿಹಾಗಿರುವ ಜತೆಗೇ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿರುವ ಕೇಂದ್ರ ಸರ್ಕಾರಕ್ಕೆ ರಾಮ್‌ದೇವ್‌ರನ್ನು ಓಲೈಸಿ, ಅವರು ಈ ಪ್ರತಿಭಟನೆಯನ್ನು ಕೈಬಿಡುವಂತೆ ವಿನಂತಿಸದೆ ಬೇರೆ ವಿಧಿಯಿರಲಿಲ್ಲ. 4 ಪ್ರಮುಖ ಕೇಂದ್ರ ಸಚಿವರುಗಳೇ ರಾಮ್‌ದೇವ್‌ರ ಜತೆಗೆ ಸಂಧಾನ ಮಾತುಕತೆಗೆ ಮುಂದಾದರೂ, ರಾಮ್‌ದೇವ್ ‘ಭ್ರಷ್ಟಾಚಾರ, ಕಪ್ಪು ಹಣ ಹಿಂಪಡೆಯುವ ಹೋರಾಟಗಳಲ್ಲಿ ರಾಜಿಯೇ ಇಲ್ಲ, ಹೋರಾಟ ಮುಂದುವರೆಸುವೆ’ ಎಂದೇ ಘೋಷಿಸಿದಾಗ ಕೇಂದ್ರ ಸರ್ಕಾರ ಮತ್ತೆ ಚಡಪಡಿಸಿತು.

ಜೂನ್ ನಾಲ್ಕಕ್ಕೆ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದ ರಾಮ್‌ದೇವ್‌ರಿಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಯಿತು. ಹಾಗೆ ನೋಡಿದಲ್ಲಿ ಅಣ್ಣಾಹಜಾರೆಯವರ ನಿರಶನಕ್ಕಿಂತಲೂ ಪ್ರಖರವಾಗಿ ಜನಾಭಿಪ್ರಾಯ ಮೂಡಿಸುವತ್ತ ಈ ಸತ್ಯಾಗ್ರಹ ಸಾಗುತ್ತಿತ್ತು. ಅಣ್ಣಾಹಜಾರೆ ನಿರಶನಕ್ಕೆ ಬೆಂಬಲ ಸೂಚಿಸಿದ್ದ ಅನೇಕ ನಾಯಕರು ವಿವಿಧ ಸಂಘಟನೆಗಳು ಬಹಿರಂಗವಾಗಿ ತಮ್ಮ ಬೆಂಬಲ ಸೂಚಿಸಿತು. ಕಾಂಗ್ರೆಸ್‌ನ ಪ್ರಭಾವಿ ನಾಯಕ ಕಮಲ್‌ನಾಥ್, ಅಣ್ಣಾಹಜಾರೆ, ಸಂತೋಷ್ ಹೆಗ್ಡೆ, ಕಿರಣ್‌ಬೇಡಿ ಸೇರಿದಂತೆ ಹಲವಾರು ಗಣ್ಯರು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಖಿಲಭಾರತ ವಿದ್ಯಾರ್ಥಿ ಪರಿಷತ್, ಸ್ವಾಭಿಮಾನ್ ಟ್ರಸ್ಟ್ ಸೇರಿದಂತೆ ನೂರಾರು ಸಂಘಟನೆಗಳ ನಾಯಕರು, ಕಾರ್ಯಕರ್ತರು ದೇಶಾದ್ಯಂತ ಒಕ್ಕೊರಲಿನಿಂದ ರಾಮ್‌ದೇವ್ ಪ್ರತಿಭಟನೆಗೆ ದನಿಗೂಡಿಸಿದ್ದರು.

ಪ್ರತಿಭಟನೆಯ ಕಾವು ಏರುತ್ತಿದ್ದಂಥೆ ಹತಾಶೆಗೊಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತುರ್ತುಪರಿಸ್ಥಿತಿಯನ್ನು ನೆನಪಿಸುವಂತೆ, ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆಯೊಂದರ ಮೂಲಕ ಬಾಬಾರಾಮ್‌ದೇವ್‌ರನ್ನು ಬಂಧಿಸಿ, ಶಾಂತಿಯುತ ಪ್ರತಿಭಟನೆಯನ್ನು ಪಾಲ್ಗೊಂಡು ರಾತ್ರಿಯ ನಿದ್ರೆಗೆ ಜಾರಿದ್ದ ಸಾವಿರಾರು ಅಮಾಯಕ ನಾಗರಿಕರ ಮೇಲೆ ಅಧಿಕಾರದ ಲಾಠಿಯೇಟು ನೀಡಿತು! ಮಹಿಳೆಯರು, ವೃದ್ಧರು ಸೇರಿದಂತೆ ಸತ್ಯಾಗ್ರಹಿಗಳ ಮೇಲೆ ದೌರ್ಜನ್ಯ ನಡೆಸಿದ ದೆಹಲಿ ಪೋಲೀಸರ ಕೃತ್ಯವನ್ನು ಸಮರ್ಥಿಸಿ ಮಾತನಾಡಿದ ಪ್ರಧಾನಿ ಡಾ|| ಮನಮೋಹನ್ ಸಿಂಗ್ ‘ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆದಿರುವುದು ದುರದೃಷ್ಟಕರ, ಆದರೆ ಅನ್ಯಮಾರ್ಗವಿರಲಿಲ್ಲ’ ಎಂಬ ಅತ್ಯಂತ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಪ್ರಧಾನಿಯ ಈ ಮಾತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿಟ್ಟ ಯಾವುದೇ ನಾಗರಿಕನಿಗೆ ಬೇಸರ ತರಿಸದೇ ಇರದು.

ಭ್ರಷ್ಟಾಚಾರವನ್ನು ಕಿತ್ತು ಹಾಕುವ ಮಾತು ಹಾಗಿರಲಿ, ಶಾಂತಿ ಪ್ರತಿಭಟನೆಯನ್ನೇ ರದ್ದು ಮಾಡುವ ಕೇಂದ್ರಸರಕಾರದ ನಿಲುವಿನಿಂದ ನಾಗರಿಕ ಸಮಾಜ ಮತ್ತೆ ಸಿಟ್ಟಿಗೆದ್ದಿದೆ. ಅಣ್ಣಾ ಹಜಾರೆ, ಹಾಗೂ ಬೆಂಬಲಿಗರು ಈ ದೌರ್ಜನ್ಯ ಖಂಡಿಸಿ ಜೂನ್ ೮ರಂದು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸರ್ಕಾರದ ಜತೆಗಿನ ಲೋಕಪಾಲ ಮಸೂದೆಯ ಮಾತುಕತೆಯನ್ನು ಬಹಿಷ್ಕರಿಸಿದ್ದಾರೆ. ಭಾರತೀಯರೆಲ್ಲರೂ ತಮ್ಮ ಸಾಮಾಜಿಕ ಕಳಕಳಿಯನ್ನು ಏಕೀಕೃತಗೊಳಿಸಬೇಕಾದ, ಅತೀ ಅಗತ್ಯವಾಗಿರುವ ಸಂದರ್ಭವಿದು.

ಇದೀಗ ಸಾಮಾಜಿಕ ಸಂಘಟನೆಗಳು, ಕಾರ್ಯಕರ್ತರು ಒಟ್ಟಾಗಿದ್ದಾರೆ. ಭ್ರಷ್ಟಾಚಾರದ ಪಿಡುಗು ಕಿತ್ತುಹಾಕುವ ಸಂಕಲ್ಪಕ್ಕೆ ಮತ್ತಷ್ಟು ರಭಸ ಸಿಗಬೇಕಾದ ಅನಿವಾರ್ಯತೆ ಇದೆ. ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣದ ಜನಸಾಮಾನ್ಯನ ಅಂತರಾಳದ ಈ ಆಶಯಕ್ಕೆ ಬೆಲೆಸಿಗಬೇಕಾದರೆ ಸಂಘಟಿತ ಹೋರಾಟವೇ ಬೇಕು. ಸ್ವಾಭಿಮಾನ ಮತ್ತೆ ಚಿಮ್ಮಿ ಬರಲೇಬೇಕು. ಅಧಿಕಾರದಲ್ಲಿರುವ ರಾಜಕಾರಣಿಗಳ ದರ್ಪ, ಮೊಂಡುತನಕ್ಕೆ ಪಾಠ ಕಲಿಸಲೇಬೇಕಾಗಿದೆ. ಅಣ್ಣಾಹಜಾರೆ, ರಾಮ್‌ದೇವರಂತಹ ನಿಸ್ವಾರ್ಥ ನಾಯಕರು ಕೊಟ್ಟ ಕರೆಗೆ ನಾವೆಲ್ಲ ಬಲ ತುಂಬಬೇಕಾಗಿದೆ. ಪಕ್ಷ, ಭಾಷೆ, ಜಾತಿ, ಎಲ್ಲ ಮೇಲು-ಕೀಳುಗಳನ್ನು ಬದಿಗೊತ್ತಿ ನಿಂತರೇನೆ ಯಶಸ್ಸು ಸಾಧ್ಯ. ಎಲ್ಲದಕ್ಕೂ ಬೇಕಾಗಿರುವುದು ಇವು ಮಾತ್ರ, ನಿಲ್ಲದ ಹೋರಾಟ, ಕುಂದದ ವಿಶ್ವಾಸ ಹಾಗೂ ಬತ್ತದ ಸ್ವಾಭಿಮಾನ.

  • ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಾಬಾರಾಮ್‌ದೇವ್‌ರವರ ಉಪವಾಸ ಸತ್ಯಾಗ್ರಹವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಸತ್ಯಾಗ್ರಹಿಗಳ ಮೇಲೆ ಕೇಂದ್ರ ಸರ್ಕಾರ ತೋರಿಸಿದ ಅಮಾನವೀಯ ಆಕ್ರಮಣವನ್ನು ನಾವು ಖಂಡಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ಈ ಪೋಲೀಸ್ ದೌರ್ಜನ್ಯ ದುರದೃಷ್ಟಕರ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಸಾಮಾಜಿಕ ಸಂಘಟನೆಯಾಗಿ ಯಾವುದೇ ಸಾಮಾಜಿಕ ಕ್ರಾಂತಿಯ ಸಂದರ್ಭದಲ್ಲಿ ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ.’ – ಆರೆಸ್ಸೆಸ್, ಪತ್ರಿಕಾ ಹೇಳಿಕೆ
  • ಪ್ರತಿಭಟನಾಕಾರರ ಮೇಲೆ ಪೋಲೀಸ್ ದೌರ್ಜನ್ಯ ನಡೆದಿರುವುದು ದುರದೃಷ್ಟಕರ. ಆದರೆ ನಮ್ಮಲ್ಲಿ ಬೇರೆ ಯಾವುದೇ ಮಾರ್ಗವಿರಲಿಲ್ಲ ವ್ಯವಸ್ಥೆಯನ್ನು ಬದಲಿಸಲು ಸಾಕಷ್ಟು ಸಮಯಾವಕಾಶದ ಅಗತ್ಯವಿದೆ, ದಿಢೀರ್ ಬದಲಾವಣೆ ಸಾಧ್ಯವಿಲ್ಲ’ – ಪ್ರಧಾನಿ ಮನಮೋಹನ್ ಸಿಂಗ್
  • ಭ್ರಷ್ಟಾಚಾರದ ವಿರುದ್ಧ ಶಾಂತರೀತಿಯಲ್ಲಿ ಉಪವಾಸ ಕೈಗೊಂಡಿದ್ದ ಬಾಬಾರಾಮ್ ದೇವ್ ಮೇಲೆ ಪೋಲೀಸ್ ದೌರ್ಜನ್ಯ ಸರಿಯಲ್ಲ; ಖಂಡನೀಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸತ್ಯಾಗ್ರಹಕ್ಕೆ ಹೆಚ್ಚಿನ ಮಹತ್ವವಿದೆ. ಭ್ರಷ್ಟಾಚಾರ ತಾಂಡವವಾಡು ತ್ತಿರುವ ಈ ವೇಳೆಯಲ್ಲಿ ರಾಮ್‌ದೇವ್ ಅಣ್ಣಾಹಜಾರೆಯಂತಹ ವ್ಯಕ್ತಿಗಳು ನಡೆಸುವ ಸಾತ್ವಿಕ ಹೋರಾಟಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. – ನ್ಯಾ|| ಸಂತೋಷ್ ಹೆಗ್ಡೆ, ಲೋಕಾಯುಕ್ತರು
  • ಇದು ನಿರಂಕುಶ ಆಡಳಿತದ ಪರಮಾವಧಿ. ತುರ್ತುಪರಿಸ್ಥಿತಿಯ ಕರಾಳದಿನಗಳನ್ನು ನೆನಪಿಸುವಂತಹ ರಾತ್ರಿಯಲ್ಲಿ ದಿಲ್ಲಿ ಪೋಲೀಸರು ಸತ್ಯಾಗ್ರಹಿಗಳ ಮೇಲೆ ದುರಾಕ್ರಮ ನಡೆಸಿ ದ್ದಾರೆ. ಇದು ದೇಶದ ಪ್ರಜಾತಂತ್ರದ ಮೇಲೆ ಕೇಂದ್ರ ಸರಕಾರ ಎಸಗಿರುವ ದೌರ್ಜನ್ಯ’ – ಎಲ್.ಕೆ. ಅಡ್ವಾಣಿ, ಮಾಜಿ ಉಪಪ್ರಧಾನಿ
Advertisements

Leave a comment

Filed under Articles

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s