ಸತ್ತದ್ದು ಭಯೋತ್ಪಾದಕ ಮಾತ್ರ, ಭಯೋತ್ಪಾದನೆ ಇನ್ನೂ ಸತ್ತಿಲ್ಲ.

ಸತ್ತದ್ದು ಭಯೋತ್ಪಾದಕ ಮಾತ್ರ, ಭಯೋತ್ಪಾದನೆ ಇನ್ನೂ ಸತ್ತಿಲ್ಲ.

ಮೇ 2ರಂದು ಮುಂಜಾನೆ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ‘ಅಮೇರಿಕನ್ ಸೇನೆಯ ಕಾರ‍್ಯಾಚರಣೆಯ ಮೂಲಕ ಜಗತ್ತಿನ ಪ್ರಬಲ ಉಗ್ರಗಾಮಿಗಳಲ್ಲೊಬ್ಬನಾದ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈಯಲಾಗಿದೆ’ ಎಂದು ಪ್ರಕಟಿಸಿದಾಗ ಜಗತ್ತೇ ಸಂಭ್ರಮಿಸಿತ್ತು.

ಜಗತ್ತು ಕಂಡು ಕೇಳರಿಯದ ಸೆಪ್ಟೆಂಬರ್ 11, 2000ದ ಭಯೋತ್ಪಾದನಾ ದಾಳಿಯ ಮೂಲಕ ಮನುಕುಲವನ್ನೇ ಬೆಚ್ಚಿ ಬೀಳಿಸಿದ ಪಾತಕಿ ಇನ್ನಿಲ್ಲ. ಶ್ರೀಮಂತ ಮನೆತನದಲ್ಲಿ, ಸೌದಿ ಆರೇಬಿಯಾದಲ್ಲಿ ಜನಿಸಿದ ಒಸಾಮಾ ಭಯೋತ್ಪಾದನೆಯ ಜಗತ್ತಿಗೆ ಕಾಲಿಟ್ಟು, ಅಲ್ಲಿ ಸಾವಿರಾರು ಉಗ್ರಗಾಮಿಗಳನ್ನು ಬೆಳೆಸಿ, ವಿಶ್ವದಾದ್ಯಂತ ಶಾಂತಿ ಕದಡಿದಾತ. ಅಮೇರಿಕನ್ ಸೇನೆಯ ಕಣ್ತಪ್ಪಿಸಲು ಅಫ್ಘಾನಿಸ್ಥಾನದಲ್ಲಿ ತಲೆಮರೆಸಿದಾತ. ನಂತರ ಎಲ್ಲಿ ಹೋದ? ಏನಾದ? ಏನ್ಮಾಡುತ್ತಿದ್ದಾನೆ? ಎಂಬ ಪ್ರಶ್ನೆಗಳು ಸರಿಯಾದ ಉತ್ತರವನ್ನೇ ಕಾಣಲಿಲ್ಲ.

೨೦೦೯ರಲ್ಲಿ ಅಮೇರಿಕಾ ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಿದರೂ ಲಾಡೆನ್‌ನನ್ನು ಪತ್ತೆಮಾಡಲು ವಿಫಲಗೊಂಡಾಗ ಅಂದಿನ ಅಮೇರಿಕಾ ರಕ್ಷಣಾ ಸಚಿವ ರಾಬರ್ಟ್ಸ್ ಗೇಟ್ಸ್ ಅಮೇರಿಕಾದ ವೈಫಲ್ಯವನ್ನು ಮಾಧ್ಯಮದ ಮುಂದೆ ಘೋಷಿಸಿದ್ದರು. ೨೦೧೦ರಲ್ಲಿ ‘ಪಾಕಿಸ್ತಾನವು ಎಲ್ಲ ತರದ ಭಯೋತ್ಪಾದಕರಿಗೆ ಆಶ್ರಯತಾಣವಾಗಿದೆ’ ಎಂದಿತ್ತು ಭಾರತ ಸರಕಾರ! ಪರೋಕ್ಷವಾಗಿ ಒಸಾಮಾನಿಗೆ ಪಾಕ್ ಆಶ್ರಯ ನೀಡಿದೆ ಎಂಬುದು ಅದರ ಸಾರವೂ ಆಗಿತ್ತು.

ಆದರೆ ಪಾಕಿಸ್ತಾನ ‘ತನ್ನ ದೇಶ ಭಯೋತ್ಪಾದನೆಯನ್ನು, ಭಯೋತ್ಪಾದಕರನ್ನು ಬೆಳೆಸಲ್ಲ, ಬೆಳೆಯಲು ಬಿಡದು’ ಎಂದು ಬೊಬ್ಬಿರಿಯಿತು. ಅದೇ ಪಾಕ್, ಇದೀಗ ಜಗತ್ತಿನೆದುರು ಅಪರಾಧಿ ಸ್ಥಾನದಲ್ಲಿ ನಿಂತಿದೆ. ಯಾಕೆ?

ರಾಬರ್ಟ್‌ಗೇಟ್ಸ್‌ರ ಘೋಷಣೆ ಬಳಿಕ ‘ಅಮೇರಿಕಾ ಒಸಾಮಾ ಬೇಟೆಯನ್ನು ಕೈ ಬಿಟ್ಟಿದೆ’ ಎಂದೇ ಭಾವಿಸಲಾಗಿದ್ದರೂ, ನೂತನ ಅಧ್ಯಕ್ಷ ಬರಾಕ್ ಒಸಾಮಾ ಈ ಕಾರ‍್ಯಾಚರಣೆಗೆ ಮತ್ತೆ ಜೀವ ಕೊಟ್ಟರು.2010ರ ಅಕ್ಟೋಬರ್‌ನಲ್ಲಿ ಕಾರ‍್ಯಪಡೆ ಸಿದ್ಧಗೊಂಡು, ಅತಿ ಸೂಕ್ಷ್ಮವಾಗಿ ಲಾಡೆನ್ ಶೋಧಕಾರ‍್ಯದಲ್ಲಿ ತೊಡಗಿತು. ಇದೇ ವೇಳೆ ಒಬಾಮಾ ಭಾರತ – ಪಾಕ್ ಸೇರಿದಂತೆ ಇದರ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ಭೇಟಿ ಮಾಡುವ ರಾಜತಾಂತ್ರಿಕ ಚಾಣಾಕ್ಷತೆಯನ್ನು ತೋರಿದರು. ಲಾಡೆನ್ ಪಾಕ್‌ನಲ್ಲಿ ಆಶ್ರಯ ಪಡೆದಿದ್ದಾನೆ, ವೇಷ, ಹೆಸರು ಬದಲಾವಣೆಯಾಗಿದೆ ಎಂಬೆಲ್ಲ ಮಾಹಿತಿಯನ್ನು ಖಚಿತ ಮಾಡಿದ ಮೇಲೆ ಅಮೇರಿಕನ್ ಸೇನೆ 20ಮಂದಿ ಯೋಧರ ತಂಡವನ್ನು ಪಾಕ್‌ನಲ್ಲಿ ಮತ್ತೆ ವಿಶೇಷವಾಗಿ ರಚಿಸಿತು.

ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಿಂದ 120ಕಿ.ಮೀ. ದೂರದಲ್ಲಿರುವ ಅಬೋಟ್ಟಾಬಾದ್ ಬಳಿಯ ಮನೆಯೊಂದರಲ್ಲಿ ಲಾಡೆನ್ ಅಡಗಿಕೊಂಡಿದ್ದ. 2005ರಲ್ಲಿ ಅಲ್ಲಿನ ಖ್ಯಾತ ವೈದ್ಯ ಡಾ|| ಖಾಜಿ ಮೊಹಪೂಜ್ ಉಲ್ ಹಕ್‌ರಿಂದ ಅರ್ಷದ್ ಖಾನ್ ಎಂಬ ನಕಲಿ ಹೆಸರಿನಲ್ಲಿ ತನ್ನ ಸೋದರ ಸಂಬಂಧಿಗಳಿಂದ ಮನೆ ಖರೀದಿಸಿದ್ದ ಲಾಡೆನ್, ತನ್ನ ಭಯೋತ್ಪಾದಕ ಸಂಘಟನೆ ಅಲ್‌ಖಾಯಿದಾದ ಚಟುವಟಿಕೆಗಳನ್ನು ಮುಂದುವರೆಸಿದ್ದ. ೫೪ರ ಹರೆಯದ ಒಸಾಮಾ ಬಿನ್ ಲಾಡೆನ್ ಕೊನೆಗೂ ಮೇ 2, 2011ರಂದು ಅಮೇರಿಕ್ ಸೇನೆಯ ಗುಂಡೇಟಿಗೆ ಬಲಿಯಾದ. ಜಗತ್ತು ನಿಟ್ಟಿಸಿರು ಬಿಟ್ಟಿತು. ಅಮೇರಿಕಾದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಅಧ್ಯಕ್ಷ ಒಬಾಮಾರಿಗೂ ಅಭಿನಂದನೆಯ ಸುರಿಮಳೆ.

ಮುಂದೇನು?

ಒಸಾಮಾ ಬಿನ್ ಲಾಡೆನ್‌ನ ಹತ್ಯೆ ನಂತರವೂ ಭಯೋತ್ಪಾದನೆಯ ಬೇರುಗಳು ದುರ್ಬಲಗೊಂಡಿಲ್ಲ. ಲಾಡೆನ್ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಪೇಶಾವರದ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಬಲಿಯಾಗಿದ್ದರು. ಅಮೇರಿಕಾ ಹಾಗೂ ಪಾಕಿಸ್ತಾನ – ಎರಡೂ ನಮಗೀಗ ಶತ್ರುದೇಶಗಳು, ಭಯೋತ್ಪಾದನಾ ದಾಳಿಗಳು ಮುಂದುವರೆಯಲಿವೆ ಎಂದಿದ್ದಾನೆ, ಅಲ್-ಖೈದಾ ಸಂಘಟನೆಯ ವಕ್ತಾರ.

ಅಲ್ ಖೈದಾ ಬೆನ್ನಲ್ಲೇ ಇತರ ಜಾಗತಿಕ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ – ಇ- ತೋಯ್ಬಾ, ಜೈಶ್ – ಇ – ಮೊಹಮ್ಮದ್ ಸೇರಿದಂತೆ ಎಲ್ಲಾ ಸಮಾನ ಮನಸ್ಕ ಉಗ್ರಸಂಘಟನೆಗಳು ಕ್ರಿಯಾಶೀಲವಾಗಿದೆ. ‘ನಾವೇನೂ ದುರ್ಬಲಗೊಂಡಿಲ್ಲ. ನಾವು ಶರಣಾಗತರಾಗುವುದೂ ಇಲ್ಲ ಸೋಲನೆಂದೂ ಅರಿಯೆವು’ ಎಂದು ಈಗಾಗಲೇ ತಾಲಿಬಾನ್ ನಾಯಕರು ಗುಡುಗಿದ್ದಾರೆ. ಭಾರತದ ಒಳಗೂ ಎಲ್ಲೆಡೆ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಸರಕಾರ ಇನ್ನಷ್ಟು ಧೃಡತೆ ತೋರಬೇಕಾಗಿದೆ.

ಕಸಬ್, ಅಫ್ಜಲ್ ಕಥೆಯೇನು?

ಛಲ ಬಿಡದೆ ಬೆನ್ನತ್ತಿದ ಪರಿಣಾಮವಾಗಿ ಲಾಡೆನನ್ನು ಪತ್ತೆಹಚ್ಚಿ, ಅಲ್ಲೇ ಅವನನ್ನು ಕೊಂದು, ಶವವನ್ನು ಸಮುದ್ರಕ್ಕೆಸೆದು ‘ಜಲಸಮಾಧಿ’ ಮಾಡಿದ ಅಮೇರಿಕಾ ಸೇನೆ, ಈ ಎಲ್ಲಾ ಕೃತ್ಯವನ್ನು ಗಂಡೆದೆಯಿಂದಲೇ ಮಾಡಿತ್ತು. ಇನ್ನೊಂದು ದೇಶದೊಳಗೆ ನುಗ್ಗಿ, ಅಲ್ಲಿನ ಸರಕಾರಕ್ಕೆ ಗೊತ್ತಿಲ್ಲದೇ, ತನಗೆ ಬೇಕಾದ ಭಯೋತ್ಪಾದಕ ನಾಯಕನನ್ನು ಮಟ್ಟಹಾಕಿ ಯಾವುದೇ ವಿಚಾರಣೇ, ವಾದಗಳಿಗೆ ಕಿವಿಗೊಡದೆ ಪಾಪಿಗೆ ತಕ್ಕ ಶಾಸ್ತಿ ಮಾಡಿತು ಅಮೇರಿಕಾ. ಪಾಕಿಸ್ತಾನ ಯಾರಿಗೂ ಸುರಕ್ಷಿತ ತಾಣವಲ್ಲ, ಸ್ವತಃ ಒಸಾಮಾ ಲಾಡೆನ್‌ಗೂ!. ಆದರೆ ಭಾರತ ಮಾತ್ರ ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ನಿರೀಕ್ಷಿತ ಗಟ್ಟಿತನ ತೋರಿಲ್ಲವೆಂದೇ ಹೇಳಬೇಕು.

ಸೆರೆಸಿಕ್ಕಿ, ಗಲ್ಲುಶಿಕ್ಷೆಯನ್ನು ಈ ನೆಲದ ನ್ಯಾಯಪೀಠ ಘೋಷಿಸಿದ್ದರೂ, ಅಫ್ಜಲ್‌ಗುರು ವಿಚಾರಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಲಕ್ಷ್ಯವನ್ನು ನಿರ್ಲಜ್ಜೆಯಿಂದ ತೋರುತ್ತಿದೆ. ಇನ್ನೂ ಆತ ನಮ್ಮ ಅತಿಥಿಯಂತೆ ಬಾಳುತ್ತಿದ್ದಾನೆ. ಮುಂಬೈ ಸ್ಪೋಟದ ಪಾತಕಿ ಅಜ್ಮಲ್ ಕಸಬ್‌ಗೆ ಕೂಡಾ ಗಲ್ಲು ದೊರೆತಿದ್ದರೂ, ಆತ ಹಾಯಾಗಿದ್ದಾನೆ. ಗೋಧ್ರಾ ರೈಲ್ವೇ ದಹನ ಪ್ರಕರಣದ ಆ ಗಲ್ಲು ಖೈದಿಗಳೂ ನಿರಾತಂಕ! ಈ ಎಲ್ಲ ಭಯೋತ್ಪಾದಕರು ಜೀವಂತ ಇರುವವರೆಗೆ ಭಯೋತ್ಪಾದನೆ ಆದೆಂತು ಸತ್ತೀತು?

ಲಾಡೆನ್ ಸತ್ತಿರಬಹುದು. ಆತನಿಂದ ಮೊಳಕೆಯೊಡೆದಿರುವ ಧರ್ಮಾಂಧ ಇಸ್ಲಾಂ ಭಯೋತ್ಪಾದನೆ ಇನ್ನೂ ಸತ್ತಿಲ್ಲ. ಜಗತ್ತು ಇದರಿಂದ ಪಾರಾಗಲು ಇನ್ನೂ ದಶಕಗಳು ಬೇಕು. ಸ್ವತಃ ಮುಸಲ್ಮಾನ್ ಆದರೂ ಇಸ್ಲಾಮ ಭಯೋತ್ಪಾದನೆಯನ್ನು ಧೈರ‍್ಯವಾಗಿ ಮೆಟ್ಟಿನಿಲ್ಲಬಲ್ಲ  ಒಬಾಮಾ ಥರದ ಗಟ್ಟಿಗರು ಬೇಕು. “ತಮ್ಮ ಹೋರಾಟ ಇಸ್ಲಾಂ ವಿರುದ್ಧ ಅಲ್ಲ, ಆದರೆ ಯಾವುದೇ ಧರ್ಮಾಧಾರಿತ ಭಯೋತ್ಪಾದನೆಯಿರಲಿ, ನಮ್ಮ ಹೋರಾಟ ನಿಲ್ಲದು” ಎಂದು ಒಬಾಮಾ ಘೋಷಿಸಿದ್ದಾರೆ. ಹೀಗಾಗಿ ಒಬಾಮಾ ಒಂದಷ್ಟು ಮಟ್ಟಿಗೆ ಭರವಸೆ ತುಂಬಿದ್ದಾರೆ.

ಇತ್ತ, ನಮ್ಮ ಕೇಂದ್ರ ಗೃಹಸಚಿವ ಚಿದಂಬರಂ, ರಾಷ್ಟ್ರದ ಭದ್ರತೆಗಿಂತಲೂ ಹೆಚ್ಚಾಗಿ ಕಾಂಗ್ರೆಸ್‌ನ್ನು ರಾಜಕೀಯವಾಗಿ ಗಟ್ಟಿಗೊಳಿಸುವುದರಲ್ಲೇ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ! ‘ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ’ ಎಂದೆಲ್ಲಾ ಹೇಳಿ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಅವಸರವಷ್ಟೇ ಕಾಂಗ್ರೆಸ್ ತೋರುತ್ತಿದೆ. ಭಯೋತ್ಪಾದನೆಯನ್ನು ಬುಡಸಹಿತ ಕಿತ್ತೆಸೆಯುವ ಧೈರ‍್ಯ ಹಾಗೂ ಇಚ್ಛಾಶಕ್ತಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಎಂದು ಬಂದೀತು? ಅಲ್ಲಿಯ ತನಕ ಭಾರತದ ನೆಲದಲ್ಲಿ ಭಯೋತ್ಪಾದನೆ ಸಾಯದು ಎಂಬ ಸತ್ಯ ನಾವರಿಯಬೇಕು.

ಸತ್ತದ್ದು ಭಯೋತ್ಪಾದಕ ಮಾತ್ರ, ಭಯೋತ್ಪಾದನೆ ಇನ್ನೂ ಸತ್ತಿಲ್ಲ.

ಅಲ್ಲವೇ?

*****************************************************

ಪಾತಕಿ ಒಸಾಮಾ ಬಿನ್ ಲಾಡೆನ್ ಸಾಗಿಬಂದ ದಾರಿ

1957 ಸೌದಿ ಅರೇಬಿಯಾದಲ್ಲಿ ಜನನ. ಯೆಮೆನ್ ಮೂಲದ ಶ್ರೀಮಂತ ಗುತ್ತಿಗೆದಾರ ಲಾಡೆನ್ ಗ್ರೂಪ್ ಮಾಲೀಕ ಮೊಹಮ್ಮದ್ ಅವಾದ್ ಬಿನ್ ಲಾಡೆನ್‌ನ ೫೨ ಮಕ್ಕಳ ಪೈಕಿ 17ನೇ ಮನನಾಗಿ ಲಾಡೆನ್ ಜನನ.

1969 ಒಸಾಮಾ 11ನೇ ವಯಸ್ಸಿನಲ್ಲಿ ತಂದೆ ಮೊಹಮ್ಮದ್ ಬಿನ್ ಲಾಡೆನ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವು. 80ದಶಲಕ್ಷ ಅಮೆರಿಕನ್ ಡಾಲರ್ ಆಸ್ತಿ ಮಕ್ಕಳ ಪಾಲು. ಸಿವಿಲ್ ಇಂಜಿನಿಯರಿಂಗ್ ಅಧ್ಯಯನಕ್ಕಾಗಿ ಜೆಡ್ಡಾಗೆ ತೆರಳಿದ ಒಸಾಮಾ.

1973  ಕೌಟುಂಬಿಕ ಉದ್ಯಮ ಮುನ್ನಡೆ, ಸಂಪತ್ತು ಕಾಯಲು, ಮೂಲಭೂತವಾದಿ ಮುಸ್ಲಿಮ್ ಸಂಘಟನೆಗಳ ಜತೆ ಒಸಾಮಾ ಸಂಪರ್ಕ.

1979 ಸೋವಿಯತ್ ಇಕ್ಕೂಟದ ವಿರುದ್ಧ ಹೋರಾಡುವ ಮುಜಾಹಿದೀನ್‌ಗಳಿಗೆ ಬೆಂಬಲ ನೀಡಲು, ಅಫ್ಘಾನಿಸ್ಥಾನಕ್ಕೆ ತೆರಳಿದ ಯುವ ಒಸಾಮಾ.

1991  ಅಮೆರಿಕ ನೇತೃತ್ವದ ಪಡೆಗಳಿಂದ ಕುವೈತ್‌ನಿಂದ ಕಾರ್ಯಾಚರಣೆ ಆರಂಭ. ಇರಾಕ್ ಮೇಲೆ ದಾಳಿ. ಕೆರಳಿದ ಒಸಾಮಾನಿಂದ ಅಮೇರಿಕ ವಿರುದ್ಧ ಜಿಹಾದ್‌ಗೆ ಘೋಷಣೆ. ಸರ್ಕಾರಿ ವಿರೋಧ ಕೃತ್ಯಗಳಿಗಾಗಿ ಸೌದಿಯಿಂದ ಗಡಿಪಾರು. ಸೂಡಾನ್‌ನಲ್ಲಿ ನಿರಾಶ್ರಿತನಾಗಿ ಆಶ್ರಯ ಕಂಡು ಕೊಂಡ ಪಾತಕಿ.

1993 ಅಮೆರಿಕದ ವಿಶ್ವವಾಣಿಜ್ಯ ಕಟ್ಟಡ ಸಮೀಪ ಬಾಂಬ್ ದಾಳಿ. ೬ಜನರ ಸಾವು, ನೂರಾರು ಜನರಿಗೆ ಗಾಯ. ಉಗ್ರಗಾಮಿಗಳ ಜತೆ ಒಸಾಮಾ ಬಿನ್ ಲಾಡೆನ್ ನಂಟು ಬಯಲು. ಅದೇ ವರ್ಷ ನವೆಂಬರ್‌ನಲ್ಲಿ ರಿಯಾದ್ ನಲ್ಲೂಕಾರ್ ಬಾಂಬ್ ಸ್ಫೋಟ. ಒಬ್ಬರು ಭಾರತೀಯರು ಸಾವು, ೬೦ ಜನರಿಗೆ ಗಾಯ. ನಮ್ಮದೇ ದಾಳಿ ಎಂದ ಬಿನ್ ಲಾಡೆನ್ ತಂಡ.

1996 ಜೂನ್ 25 ರಂದು ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಸೌದಿಯ ಖೋಬಾರ್‌ನಲ್ಲಿದ್ದ ಅಮೆರಿಕ ಸೇನಾ ನೆಲೆ ಬಳಿ ಸ್ಫೋಟ, 19 ಅಮೆರಿಕ ನಾಗರಿಕರ ಸಾವು, ೩೮೬ ಜನರಿಗೆ ಗಾಯ. ಅಮೆರಿಕದಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಸೂಡಾನ್‌ನಿಂದಲೂ ಲಾಡೆನ್‌ಗೆ ಬಹಿಷ್ಕಾರ. ಮೂವರು ಪತ್ನಿಯರು, ೧೦ ಮಕ್ಕಳ ಜತೆ ಅಫ್ಘಾನಿಸ್ಥಾನಕ್ಕೆ ಸ್ಥಳಾಂತರಗೊಂಡ ಒಸಾಮಾ.

1998 ಆಗಸ್ಟ್ 7 ರಂದು ನೈರೋಬಿ, ಕೀನ್ಯಾ, ತಾಂಜೇನಿಯಾದ ಅಮೇರಿಕ ರಾಯಭಾರಿ ಕಚೇರಿಯ ಹೊರಗಡೆ ಟ್ರಕ್ ಬಾಂಬ್ ಸ್ಫೋಟ, ೨೨ಕ್ಕೂ ಅಧಿಕ ಜನರ ಸಾವು.

1998  ನವೆಂಬರ್‌ನಲ್ಲಿ ವಿಶ್ವದ ಹಲವೆಡೆ ಅಫ್ಘಾನ್ ರಾಯಭಾರಿ ಕಚೇರಿ ಹೊರಗೆ ನಡೆದ ಬಾಂಬ್ ಸ್ಫೋಟದಲ್ಲಿ ಲಾಡೆನ್ ಪಾತ್ರ ದೃಢಪಡಿಸಿದ ಅಮೆರಿಕ ನ್ಯಾಯಾಲಯ. ಒಸಾಮಾ ಪತ್ತೆಗೆ 5 ದಶಲಕ್ಷ ಡಾಲರ್ ಬಹುಮಾನ ಪ್ರಕಟಿಸಿದ ಅಮೆರಿಕ ಸರ್ಕಾರ.

2000 ಅಕ್ಟೋಬರ್ 12ರಂದು, ಯೆಮೆನ್‌ನಲ್ಲಿದ್ದ ಅಮೆರಿಕನ್ನರ ನೆಲೆ ಮೇಲೆ ಆತ್ಮಾಹುತಿ ದಾಳಿ, 17ಯೋಧರ ಸಾವು.

2000 ದಿಂದ 2011 ಏಪ್ರಿಲ್ ತನಕ ತಲೆಮರೆಸಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿ.

2001 : 1999ರಲ್ಲಿ ಅಮೇರಿಕ ರಾಯಭಾರಿ ಕಚೇರಿಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ. 29ರಂದು ಲಾಡೆನ್‌ನ ನಾಲ್ವರು ಸಹಚರರಿಗೆ ಶಿಕ್ಷೆ ಜಾರಿ.

ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವವಾಣಿಜ್ಯ ಕಟ್ಟಡ ಹಾಗೂ ಪೆಂಟಗನ್ ಮೇಲೆ ಅಲ್‌ಖೈದಾ ಉಗ್ರರಿಂದ ಆತ್ಮಾಹುತಿ ವೈಮಾನಿಕ ದಾಳಿ. 3 ಸಾವಿರಕ್ಕೂ ಅಧಿಕ ಜನರ ಸಾವು.

2011 ಮೇ 2ರಂದು ಅಂತಿಮವಾಗಿ ಒಸಾಮಾ ಅಮೆರಿಕ ಯೋಧರ ಗುಂಡಿಗೆ ಬಲಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರಿಂದ ಅಧಿಕೃತ ಘೋಷಣೆ. ಲಾಡೆನ್ ಹಿರಿಯ ಪುತ್ರ ಕೂಡಾ ಕಾರ್ಯಾಚರಣೆಯಲ್ಲಿ ಸಾವು, ಅಮೆರಿಕ ಸೇನೆ ಬಹಿರಂಗ.

ಅಲ್ ಖೈದಾ ಪಾತಕ ಕೃತ್ಯಗಳು

1992 ಡಿಸೆಂಬರ್ 29ರಂದು ಅಲ್‌ಖೈದಾ ಮೊದಲ ಬಾರಿಗೆ ಆಡೆನ್‌ನಲ್ಲಿ ದಾಳಿ ನಡೆಸಿತು. ಗೋಲ್ಡ್ ಮೊಹುರ್ ಹೋಟೆಲ್ ಮೇಲೆ ಬಾಂಬ್ ದಾಳಿ, ಒಬ್ಬರು ಆಸ್ಟೇಲಿಯಾ ಪ್ರಜೆಗಳ ಸಾವು.

1993 ಅಮೆರಿಕಾದ ವಿಶ್ವವಾಣಿಜ್ಯ ಕಟ್ಟಡಗಳ ವ್ಯಾಪ್ತಿಯಲ್ಲಿ ಕಾರ್ ಬಾಂಬ್ ಸ್ಫೋಟ, 6ಜನರ ಸಾವು.

1993 ಮುಂಬೈನಲ್ಲಿ 13 ಸರಣಿಬಾಂಬ್ ಸ್ಫೋಟ. 240ಜನರ ಸಾವು, 700 ಜನರಿಗೆ ಗಾಯ.

1994  ಫಿಲಿಪೈನ್ಸ್ ಬೋಜಿನಿಕಾ ಏರ್‌ಲೈನ್ಸ್ ವಿಮಾನದ ಮೇಲೆ ದಾಳಿ.

1998 ಕೀನ್ಯಾದ ನೈರೋಬಿಯಲ್ಲಿ ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ 200ಕ್ಕೂ ಅಧಿಕ ಜನರ ಸಾವು.

2001 ಅಮೆರಿಕದ ವಿಶ್ವವಾಣಿಜ್ಯ ಕಟ್ಟಡದ ಮೇಲೆ ದಾಳಿ. 3ಸಾವಿರಕ್ಕೂ ಅಧಿಕ ಸಾವು.

2002  ಇಂಡೋನೇಶಿಯಾದ ಬಾಲಿಯಲ್ಲಿ ಪ್ರವಾಸಿಗರ ಜಿಲ್ಲೆ ಕುತಾದಲ್ಲಿ ದಾಳಿ. 202 ಜನರ ಸಾವು.

2003 ಇಸ್ತಾಂಬುಲ್‌ನಲ್ಲಿ ಬಾಂಬ್ ಸ್ಫೋಟ.57 ಜನರ ಸಾವು, 700 ಜನರಿಗೆ ಗಾಯ.

2004 ಸೂಪರ್‌ಫೆರ್ರಿ ಸ್ಫೋಟ. 14 ಸಾವು.

2004 ಫಿಲಿಫೈನ್ಸ್‌ನಲ್ಲಿ ರೈಲು ಸ್ಫೋಟ. 117 ಸಾವು.

2005  ಲಂಡನ್‌ನ ನೆಲಸೇರುವೆ ಬಳಿ ಬಾಂಬ್ ಸ್ಪೋಟ. 56ಜನರ ಸಾವು.

2006 ಮುಂಬೈ ರೈಲು ಸ್ಫೋಟ. 209 ಜನರ ಸಾವು. 700ಕ್ಕೂ ಅಧಿಕ ಜನರಿಗೆ ಗಾಯ.

2008 ಕಂದಹಾರ್ ಬಾಂಬ್ ಸ್ಫೋಟ. ನಾಯಿ ಕಾಳಗದ ವೇಳೆ ಸ್ಫೋಟಕ್ಕೆ ಹಲವರು ಬಲಿ. ಪಾಕಿಸ್ಥಾನದ ಡ್ಯಾನಿಷ್ ರಾಯಭಾರಿ ಕಚೇರಿ ಸಮೀಪ ದಾಳಿ. ೬ ಜನರ ಸಾವು.

2010 ಪಾಕಿಸ್ಥಾನದ ಲಕ್ಕಿ ಮರ್ವತ್ ಜಿಲ್ಲೆಯಲ್ಲಿ ಆತ್ಮಾಹಿತಿ ಸ್ಫೋಟ – ಹಲವಾರು ಸಾವು. ಲಾಹೋರ್‌ನ ಅಹ್ಮದಿ ಮಸೀದಿ ಮೇಲೆ ಸ್ಫೋಟ ನೂರಾರು ಜನರ ಬಲಿ.

(ಲೇಖನ : ರಾಜೇಶ್ ಪದ್ಮಾರ್ , ಬೆಂಗಳೂರು)

Advertisements

Leave a comment

Filed under Articles

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s